ಕಣ್ವಮಠ ಹುಣಸಿಹೊಳೆ ಕ್ಷೇತ್ರ ಮತ್ತು ಮಠದ ಇತರ ಕ್ಷೇತ್ರಗಳ ಸಂಕ್ಷಿಪ್ತ ಪರಿಚಯ:-
ಶ್ರೀಮತ್ ಕಣ್ವಮಠ ಹುಣಸಿಹೊಳೆಯಲ್ಲಿ ಶ್ರೀ ಗೋಪಾಲಕೃಷ್ಣನ ವಿಗ್ರಹ, ಶ್ರೀ ಪ್ರಾಣದೇವರ ವಿಗ್ರಹ, ಶ್ರೀ ಯಾಜ್ಞವಲ್ಕ್ಯರ ವಿಗ್ರಹ, ಕಣ್ವಮಠ ಸ್ಥಾಪಕರಾದ ಶ್ರೀ ಮಾಧವ ತೀರ್ಥರ ಮೃತ್ತಿಕಾ ವೃಂದಾವನ ಸ್ಥಾಪನೆಯಾದ ದಿನದಿಂದ, ಎಲ್ಲಾ ವಿಗ್ರಹಗಳ ಪೂಜೆ, ಸಂಸ್ಥಾನ ಪೂಜೆ, ಶ್ರೀಚಕ್ರಾಂಕಿತ ಕಾಶಿ ವಿಶ್ವನಾಥ ಸ್ಫಟಿಕಲಿಂಗ ಪೂಜೆ, ಇತರ 6 ಯತಿಗಳ ಬೃಂದಾವನ ಪೂಜೆ ಪ್ರತಿನಿತ್ಯ ವಿಧಿವತ್ತಾಗಿ ಭಕ್ತಿಪೂರ್ವಕವಾಗಿ ವಿಜ್ರಂಭಣೆಯಿಂದ ನಡೆಯುತ್ತಿದೆ. ಮಠದಲ್ಲಿ, ಬಂದ ಭಕ್ತರಿಗೆಲ್ಲಾ ಪ್ರತಿನಿತ್ಯ ವಸತಿ ವ್ಯವಸ್ಥೆ, ಅನ್ನಸಂತರ್ಪಣೆ ವ್ಯವಸ್ಥೆ ಇರುತ್ತದೆ. ಮಠಕ್ಕೆ ಬಂದ ಭಕ್ತರೆಲ್ಲ "ಕಣ್ವತೀರ್ಥ" ಪುಷ್ಕರಣಿಯಲ್ಲಿ ಮಿಂದು ಪಾವನರಾಗುತ್ತಾರೆ.
ಕಣ್ವಮಠದ 6 ಪೀಠಾಧಿಪತಿಗಳ ಮತ್ತು 3 ಮೋಕ್ಷಾಪೇಕ್ಷಿ ಯತಿಗಳ ವೃಂದಾವನಗಳು ವಿವಿಧ ಕ್ಷೇತ್ರಗಳಲ್ಲಿವೆ. (1) ಲಿಂಗಸೂಗೂರು ತಾಲೂಕಿನ ಬುದ್ದಿನ್ನಿಯಲ್ಲಿ ಶ್ರೀ ಮಾಧವ ತೀರ್ಥರ ವೃಂದಾವನ (2) ಮುದ್ದೇಬಿಹಾಳ ತಾಲೂಕಿನ ಬಿಳೆಭಾವಿಯಲ್ಲಿ ಶ್ರೀ ಅಕ್ಷೋಭ್ಯತೀರ್ಥರ ಹಾಗೂ ಶ್ರೀ ವಿದ್ಯಾನಿಧಿತೀರ್ಥರ ವೃಂದಾವನಗಳು (3) ಸಿಂಧನೂರು ತಾಲೂಕಿನ ಗೊರಲೂಟಿಯಲ್ಲಿ ಶ್ರೀ ವಿದ್ಯಾಸಂಪೂರ್ಣತೀರ್ಥರ ವೃಂದಾವನ (4) ಹೊಸಪೇಟೆಯ ತಾಲೂಕಿನ ಕಮಲಾಪುರದಲ್ಲಿ ಶ್ರೀ ವಿದ್ಯಾವಿರಾಜತೀರ್ಥರ ವೃಂದಾವನ (5) ಬೆಂಗಳೂರು ಜಿಲ್ಲೆಯ ಬಿದರಹಳ್ಳಿಯಲ್ಲಿ ಶ್ರೀ ವಿದ್ಯಾಭೂಷಣತೀರ್ಥರ ವೃಂದಾವನ (6) ಆಂದ್ರಪ್ರದೇಶದ ಆದವಾನಿಯಲ್ಲಿ ಶ್ರೀ ವಾಮನ ತೀರ್ಥರ ವೃಂದಾವನ (7) ಸುರಪುರ ತಾಲೂಕಿನ ಸೂಗೂರಲ್ಲಿ ಶ್ರೀ ವೀಷ್ಣುಪ್ರಿಯತೀರ್ಥರ ವೃಂದಾವನ (8) ಸುರಪುರದಲ್ಲಿ ಶ್ರೀ ಕೃಷ್ಣದ್ವೈಪಾಯನತೀರ್ಥರ ವೃಂದಾವನ. ಇವೆಲ್ಲ ಕ್ಷೇತ್ರಗಳಲ್ಲಿ ಅಲ್ಲಿಯ ಸುತ್ತಮುತ್ತಲಿನ ಭಕ್ತಾದಿಗಳ ಸಹಕಾರದಿಂದ ನಿತ್ಯ ವೃಂದಾವನ ಪೂಜೆ ಹಾಗೂ ಮೇಲಿಂದ ಮೇಲೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಇವೆಲ್ಲ ಕ್ಷೇತ್ರಗಳು ಶುಕ್ಲಯಜುರ್ವೇದಿಯರ ಪವಿತ್ರ ಧಾರ್ಮಿಕ ಕ್ಷೇತ್ರಗಳಾಗಿದ್ದು, ಶುಕ್ಲಯಜುರ್ವೇದದ ತತ್ವಪ್ರಚಾರ ಸಾಂಗವಾಗಿ ನಡೆಯುತ್ತಿದೆ. ಕಣ್ವಮಠದ ಇನ್ನೊಂದು ಕ್ಷೇತ್ರವಾದ ಶ್ರೀ ಮಾಧವತೀರ್ಥರ ತಪೋಭೂಮಿ "ವೀರಘಟ್ಟವು”, ಕೃಷ್ಣಾನದಿ ತೀರದ ಪ್ರಶಾಂತ ಸ್ಥಳದಲ್ಲಿದೆ. ಇಲ್ಲಿ ಭಕ್ತಾದಿಗಳಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲು ಅನುಕೂಲ ಮಾಡಲಾಗಿದೆ ಹಾಗೂ ಭಕ್ತಾದಿಗಳು ಇದರ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕಣ್ವಮಠದ ಇನ್ನೊಂದು ಮಹತ್ವದ ಧರ್ಮಕ್ಷೇತ್ರವೆಂದರೆ ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಇರುವ "ಕಣ್ವಮಠ ಯಲಹಂಕ ಶಾಖಾಮಠ". ಈ ಕ್ಷೇತ್ರದಲ್ಲಿ ಮೇಲಿಂದ ಮೇಲೆ ಸಾಕಷ್ಟು ಕಾರ್ಯಕ್ರಮಗಳನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಮುಖ್ಯಪ್ರಾಣ ದೇವರ ನಿತ್ಯ ಪೂಜೆ ಹಾಗೂ ಹನುಮಜಯಂತಿ ಉತ್ಸವವು ವಿಶೇಷವಾಗಿರುತ್ತದೆ.
ಕಣ್ವಮಠದ ಬಹುತೇಕ ಯತಿವರೇರ್ಯರು ತಮ್ಮ ಧರ್ಮ ಪ್ರಚಾರವನ್ನು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸದೆ ಆಂದ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ ಮತ್ತು ಉತ್ತರ ಭಾರತದ ಅನೇಕ ಪ್ರಾಂತಗಳಲ್ಲಿ ಧರ್ಮಪ್ರಚಾರ ಮಾಡುತ್ತಲೇ ಬಂದಿದ್ದಾರೆ ಹಾಗೂ ಬೇರೆ ರಾಜ್ಯಗಳ ಅನೇಕ ಭಕ್ತಾದಿಗಳು ಶ್ರೀ ಕಣ್ವಮಠ ಹುಣಸಿಹೊಳೆಗೆ ಬಂದು ತಮ್ಮ ಸೇವೆ ಸಲ್ಲಿಸಿ ಕಣ್ವಮಠದ ಉಪಾಶ್ಯದೇವರಾದ ಶ್ರೀ ವಿಠ್ಠಲಕೃಷ್ಣನ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಾರೆ ಹಾಗೂ ಶ್ರೀಗಳ ಆಶೀರ್ವಾದ ಪಡೆಯುತ್ತಿದ್ದಾರೆ.