ಮಠದ ಪರಂಪರೆ, ಧರ್ಮಪ್ರಚಾರ, ಅಭಿವೃದ್ಧಿ ಮತ್ತು ಸಂಘಟನೆ:- ಸುರಪುರದ ಬ್ರಹ್ಮವೃಂದವು ಅಮಿತೋತ್ಸಾಹದಿಂದ ಅತ್ಯಂತ ವೈಭವೋಪೇತರಾಗಿ ಶ್ರೀಮನ್ಮಾಧವತೀರ್ಥರನ್ನು ಸ್ವಾಗತ ಮಾಡಿತು. ನಿತ್ಯವೂ ಶ್ರೀ ವಿಠಲ ಕೃಷ್ಣನ ಪೂಜೆ, ಪಾಠ, ಪ್ರವಚನಾದಿಗಳು ನಡೆದವು. ಅನೇಕ ಜನರು ಇವರ ಪ್ರಭಾವಕ್ಕೆ ಮನಸೋತು ಇವರ ಶಿಷ್ಯತ್ವವನ್ನು ವಹಿಸಿ ಕಣ್ವಮಠದ ಶಿಷ್ಯರಾದರು. "ಸುರಪುರದ ರಾಜಾ ಇಮ್ಮಡಿ ವೆಂಕಪ್ಪನಾಯಕನಂತೂ" ಶ್ರೀ ಮಾಧವ ತೀರ್ಥರ ಆಗಮನದಿಂದ ತನ್ನ ಸಂಸ್ಥಾನವೇ ಪಾವನವಾಯ್ತು ಎಂದು ಭಾವಿಸಿ ಶ್ರೀಗಳವರಿಗೆ ಬಹಳೇ ಮರ್ಯಾದೆ ಮಾಡಿದರು. ಭಕ್ತಿಪುರಸ್ಸರವಾಗಿ ಶ್ರೀಪಾದಂಗಳವರ ಪಾದಪೂಜೆ ಸಮಾರಂಭವನ್ನು ಒಳ್ಳೆ ವೈಭವದಿಂದ ಜರುಗಿಸಿದರು. ಇದೇ ಸಮಯಕ್ಕೆ "ರಾಮಾಪುರ" ಎಂಬ ಗ್ರಾಮವನ್ನು ದಾನಪತ್ರ ಬರೆದು ಶ್ರೀಗಳವರಿಗೆ ಸಮರ್ಪಿಸಿದರು. ಅದಕ್ಕೆ ಪ್ರತಿಯಾಗಿ ಶ್ರೀ ಮಾಧವತೀರ್ಥರು "ರಾಜನೇ, ನಾವು ಸಂನ್ಯಾಸಿಗಳು. ಇದಾವುದೂ ನಮಗೆ ಬೇಕಿಲ್ಲ. ಜಗತ್ಕಲ್ಯಾಣ ಕಾರಣನಾದ ಶ್ರೀ ವಿಠ್ಠಲಕೃಷ್ಣ ದೇವರು ನಿನ್ನ ರಾಜ್ಯದಲ್ಲಿ ಜಗದೋದ್ಧಾರಕ್ಕಾಗಿ ಬಂದು ನೆಲೆಸಿರುವನು. ಈತನ ದರ್ಶನಕ್ಕಾಗಿ ಕಣ್ವಮಠಕ್ಕೆ ಭಗವದ್ಭಕ್ತರು ಆಗಮಿಸುವರು. ಇಂಥ ಭಕ್ತರ ಆತಿಥ್ಯದಲ್ಲಿ ನೀನು ವೆಚ್ಚಮಾಡುವವನಾಗು. ಅಂದರೆ ನಿನ್ನ ಕಲ್ಯಾಣವಾಗುವದು." ನಾವು ಸಂನ್ಯಾಸಿಗಳು, ನಮಗೆ ಈ ದಾನದ ಭಾರವನ್ನು ವಹಿಸಬೇಡಿ. ಈ ದಾನಪತ್ರವನ್ನು ಮರಳಿ ತೆಗೆದುಕೊಳ್ಳಬೇಕು. ಕೃಷ್ಣವೇಣಿಯು ಉತ್ತರವಾಹಿನಿಯಾಗಿ ಹರಿದ, ತಿಂತಣಿಯ ಆಚೆ ದಡದಲ್ಲಿರುವ ಪವಿತ್ರವಾದ ವೀರಘಟ್ಟದಲ್ಲಿ ಕಣ್ವಮಠವನ್ನು ನಿರ್ಮಿಸಬೇಕೆಂದಿದ್ದೇವೆ. ಅದಕ್ಕೆ ಬೇಕಾಗುವ ವ್ಯವಸ್ಥೆಮಾಡಬೇಕೆಂದು ಆಜ್ಞಾಪಿಸುತ್ತೇವೆ. ವೆಂಕಟಪ್ಪನಾಯಕರು ಶ್ರೀಗಳನ್ನು ವಿನಂತಿ ಪೂರ್ವಕವಾಗಿ ಕೇಳಿಕೊಳ್ಳುತ್ತಾರೆ. ಮಾನ್ಯ ಶ್ರೀಗಳೇ ! ತಮ್ಮ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತೇವೆ. ತಮ್ಮನ್ನು ರಾಜಯತಿಗಳೆಂದು ನಮ್ರವಾಗಿ ಒಪ್ಪಿಕೊಂಡು ತಮ್ಮ ನಿತ್ಯ ನೈಮಿತ್ತಿಕ ಕಾರ್ಯಗಳು ಸಾಂಗವಾಗಿ ನಡೆಯುವಂತೆ ನೋಡಿಕೊಳ್ಳುತ್ತೇವೆ. ವೀರಘಟ್ಟ (ವೀರಘಟ್ಟವನ್ನು ವೀರಗೊಟ್ಟ ಮತ್ತು ವೀರಗೋಟ ಮತ್ತು ಇರಗೋಟ ಎಂತಲೂ ಕೆರೆಯೂತ್ತಾರೆ )ದಲ್ಲಿ ವೇದಘೋಷ ಅನವರತ ಮಾರ್ದನಿಗೊಳ್ಳಲೆಂದು ಶ್ರೀ ವೇಣುಗೋಪಾಲಸ್ವಾಮಿಯಲ್ಲಿ ಪ್ರಾರ್ಥಿಸುತ್ತೇವೆ. ರಾಜನು ಭಕ್ತ್ಯಾತಿಶಯದಿಂದ ಗುರ್ವಾಜ್ಞೆಯನ್ನು ಶಿರಸಾವಹಿಸಿ ತನು, ಮನ, ಧನಗಳಿಂದ ಕಣ್ವಮಠದ ಸೇವೆಯನ್ನು ಮಾಡತೊಡಗಿದನು. ಹೀಗೆ ರಾಜಾಶ್ರಯ ಪಡೆದ ಶ್ರೀ ಮಾಧವತೀರ್ಥಯತಿವರ್ಯರು ತಮ್ಮ ಆಯುಷ್ಯದ ಹಾಗೂ ಮಠ ಸ್ಥಾಪನೆಯ ಧ್ಯೇಯವಾಗಿದ್ದ ಧರ್ಮ ಪ್ರಚಾರ ಕಾರ್ಯ ಹಾಗೂ ಶುಕ್ಲಯಜುರ್ವೇದಿಯರ ಸಂಘಟನೆ ಕಾರ್ಯದಲ್ಲಿ ತಲ್ಲೀನರಾಗುತ್ತ ಕಣ್ವಮಠದ ಪರಿವಾರದೊಂದಿಗೆ ದೇಶ ಸಂಚಾರಕ್ಕೆ ಹೊರಟರು. ದಾರಿಮಧ್ಯದಲ್ಲಿ ತೀರ್ಥಕ್ಷೇತ್ರಗಳಲ್ಲಿ ಸ್ನಾನ ವಿಧಿಗಳನ್ನು ಮಾಡಿ ಕಣ್ವಮಠದ ಉಪಾಶ್ಯದೇವರಾದ ಶ್ರೀ ವಿಠ್ಠಲಕೃಷ್ಣ ದೇವರ ಪೂಜಾ, ಅರ್ಚನೆಗಳನ್ನು ಮಾಡುತ್ತಲೂ ಜನರಲ್ಲಿ ವಿಷ್ಣುಭಕ್ತಿಯನ್ನೂ, ಶ್ರೀ ನಾರಾಯಣೋಪಾಸನೆಯನ್ನೂ ಬೆಳೆಸುತ್ತಾ ಹೋದರು. ಸಂಚಾರದಲ್ಲಿ ತಮ್ಮ ವಿದ್ವತ್ಪೂರ್ಣ ಪ್ರಾಸಾದಿಕ ವಾಣಿಯಿಂದ ಶಿಷ್ಯರಿಗೆ ಪಾಠ, ಪ್ರವಚನ ಮಾಡುತ್ತ ಶುಕ್ಲ ಯಜುರ್ವೇದದ ತತ್ವರಹಸ್ಯಗಳನ್ನು ಬೋಧಿಸಿದರು. ಅವರ ಬೊಧನೆಯಲ್ಲಿ ವೇದಾಂತ ತತ್ವ ರಹಸ್ಯಗಳೆಲ್ಲ ತಿಳಿ ತಿಳಿಯಾಗಿ ತಿಳಿವಿನ ತೆರೆ ತೊರೆಯಾಗಿ ಹರಿದು ಬರುತ್ತಿದ್ದವು. ಅವರ ನುಡಿಮುತ್ತುಗಳಲ್ಲಿ ಭಗವದ್ಭಕ್ತಿ, ತತ್ವಜ್ಞಾನಗಳೆರಡೂ ಹಾಸುಹೊಕ್ಕಾಗಿ ಬೆರೆತು ಶ್ರೋತೃಗಳೆಲ್ಲಾ ಆನಂದತುಂದಿಲರಾಗುತ್ತಿದ್ದರು. ಹೀಗೆ ತಮ್ಮ ಪ್ರಯಾಣವನ್ನು ಧರ್ಮಪ್ರಚಾರ ಮಾಡುತ್ತ ತುಂಗಭದ್ರಾ ತೀರ, ಬೆಂಗಳೂರು, ಕೋಲಾರ, ಚಿಂತಾಮಣಿ, ಮುಳಬಾಗಿಲು, ಅರಸಿಕೆರೆ, ಚಿಕ್ಕಬಳ್ಳಾಪುರ, ಬೆಳಗಾವಿ, ಧಾರವಾಡ, ಗದಗ, ರೋಣ, ದಕ್ಕಲಿ, ವಿಜಯಪುರ ಕಡೆಗೆ ಬೆಳೆಸಿದರು. ಮಾರ್ಗ ಮಧ್ಯದಲ್ಲಿ ಆದವಾನಿ, ಅನಂತಪುರ ಗಳಲ್ಲಿ ವಾಸ್ತವ್ಯ ಮಾಡುತ್ತ ನಡೆದರು. ಕಣ್ವಮಠದ ಪೀಠಾಧಿಪತಿಗಳಾದ ಶ್ರೀ ಮಾಧವತೀರ್ಥರ ದರ್ಶನ ಪಡೆಯಲು ಸಮಸ್ತ ಕಣ್ವಶಾಖೆಯ ದ್ವೈತ ಮತ್ತು ಶೈವಸಂಪ್ರದಾಯದವರೆಲ್ಲರೂ ಬಂದು ತಮ್ಮ ಸೇವೆ ಸಲ್ಲಿಸಿ ಶ್ರೀಗಳ ಆಶೀರ್ವಾದ ಪಡೆಯುತ್ತಿದ್ದರು. ಸ್ಮಾರ್ಥ, ವ್ಯೆಷ್ಣವ, ಮಾಧ್ವರೆಂಬ ತಾರತಮ್ಯ ತೋರದೇ ಶುಕ್ಲ ಯಜುರ್ವೇದದ ವಿದ್ವಾಂಸರಿಗೆ ಮಾನಸನ್ಮಾನ ಮಾಡುತ್ತಿದ್ದರು. ಹೀಗೆಯೇ ಶ್ರೀಪಾದಂಗಳವರು ದೀರ್ಘ ಸಂಚಾರ ಮುಗಿಸಿ ಮರಳಿ ವೀರಘಟ್ಟಕ್ಕೆ ಬಂದ ಮೇಲೆ ಒಂದು ವರ್ಷ ವಿಜಯಯಾತ್ರೆಗೈಯದಿರಲು ನಿರ್ಧರಿಸಿ ಈ ಅವಧಿಯಲ್ಲಿ ಅಧ್ಯಯನ, ಅಧ್ಯಾಪನ, ತಪಸ್ಸು ಮತ್ತು ಭಕ್ತರ ಸಮಸ್ಯೆಗಳಿಗೆ ಉಪಾಯ ಸೂಚಿಸುವುದು ಇವುಗಳನ್ನೇ ತಮ್ಮ ಕಾರ್ಯಕ್ರಮಗಳನ್ನಾಗಿಸಿಕೊಂಡರು. ಶ್ರೀಮನ್ಮಾಧವತೀರ್ಥರು ಒಟ್ಟಾರೆ ಮೂವರು ಮಹನೀಯರಿಗೆ ಯತ್ಯಾಶ್ರಮವನ್ನು ಕೊಟ್ಟಿರುವರೆಂದು ತಿಳಿದುಬರುತ್ತದೆ. ಇವರಲ್ಲಿ ಶ್ರೀ ವಾಮನತೀರ್ಥರು (ಇವರು ಶ್ರೀ ಮಾಧವತೀರ್ಥರ ಪೂರ್ವಾಶ್ರಮದಲ್ಲಿ ವಿದ್ಯಾಗುರುಗಳಾಗಿದ್ದ ವೇದಶಾಸ್ತ್ರ ಸಂಪನ್ನರಾದ ಆದವಾನಿಯ ಶ್ರೀ ಧರ್ಮಭಟ್ಟರು ) ಮತ್ತು ವಿಷ್ಣುಪ್ರೀಯತೀರ್ಥರು ಎಂಬ ಇಬ್ಬರು ಸ್ವಇಚ್ಛೆಯಿಂದ ಮೋಕ್ಷಾರ್ಥಿಯಾಗಿ ಸಂನ್ಯಾಸ ಸ್ವೀಕರಿಸಿದರು (ಬಿಡಿ ಸಂನ್ಯಾಸಿಗಳು). ಮೂರನೆಯವರಾದ ಶ್ರೀ ಅಕ್ಷೋಭ್ಯತೀರ್ಥರೆಂಬುವರು ಶ್ರೀ ಮಾಧವತೀರ್ಥರ ತರುವಾಯ ಕಣ್ವಮಠದ ಪೀಠವನ್ನಲಂಕರಿಸಿದ ಯತಿವರ್ಯರು. ಹೀಗೆಯೇ ದಿನಗಳು ಕಳೆದಂತೆ ಶ್ರೀ ಮಾಧವತೀರ್ಥರ ಆರೋಗ್ಯವು ವಿಷಮಿಸಿತು. ವೃಂದಾವನಸ್ಥರಾಗುವ ಕಾಲ ಪ್ರಾಪ್ತವಾಯಿತೆಂದು ತಮ್ಮ ದೃಷ್ಟಿಯಿಂದ ತಿಳಿದುಕೊಂಡವರಾಗಿ ತಮ್ಮ ಪ್ರಯಾಣವನ್ನು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಬುದ್ದಿನ್ನಿ ಗ್ರಾಮದ ಕಡೆಗೆ ಬೆಳೆಸಿದರು. ಬುದ್ದಿನ್ನಿಗೆ ಆಗಮಿಸಿದ ನಂತರ ಶ್ರೀಗಳು ಶಿಷ್ಯ ಮಂಡಲಿಯನ್ನು ಕರೆದು ಭಗವತ್ಪ್ರೇರಣಾನುಸಾರವಾಗಿ ನಾವು ಬುದ್ದಿನ್ನಿಯಲ್ಲಿಯೇ ವೃಂದಾವನಸ್ಥರಾಗುವದಾಗಿ ಸಂಕಲ್ಪಿಸಿರುವೆವು. ಅಲ್ಲಿಯ ತನಕ ಶ್ರೀ ವಿಠ್ಠಲಕೃಷ್ಣದೇವರ ಪೂಜೆ ಇಲ್ಲಿಯೇ ನಡೆಯಬೇಕೆಂದು ಅಪ್ಪಣೆ ಮಾಡಿದರು. ಹೀಗೆಯೇ ದಿನಗಳು ಕಳೆದಂತೆ ಮಠಕ್ಕೆ ಒಬ್ಬ ಶಿಷ್ಯರನ್ನು ಸ್ವೀಕರಿಸುವ ಕಾಲವು ಕ್ರಮಪ್ರಾಪ್ತವಾಗಿ ಬರಲು ಶಾ. ಶಕೆ 1732 (ಕ್ರಿ. ಶ. 1810) ಶುಕ್ಲ ನಾಮ ಸಂವತ್ಸರ ಚೈತ್ರ ಶುದ್ಧ ತೃತಿಯಾ ದಿವಸ ಶ್ರೀ ಅಕ್ಷೋಭ್ಯತೀರ್ಥರಿಗೆ ಸಂನ್ಯಾಸ ದೀಕ್ಷೆಯನ್ನಿತ್ತು ಮಠದ ಪೀಠವನ್ನು ವಹಿಸಿಕೊಟ್ಟರು. ಆನಂತರ ದುಃಖತಪ್ತರಾಗಿದ್ದ ಶಿಷ್ಯವೃಂದವನ್ನು ಸಾಂತ್ವನಗೊಳಿಸಿದರು. ಮರುದಿವಸ ಅಂದರೆ ಶಾ. ಶ. 1732 (ಕ್ರಿ. ಶ. 1810) ಶುಕ್ಲನಾಮ ಸಂವತ್ಸರ ಚೈತ್ರ ಶುದ್ಧ ಚತುರ್ಥಿಯ ಪುಣ್ಯ ದಿವಸ ಶ್ರೀ ಮಾಧವತೀರ್ಥರು ಹರಿಪಾದವನ್ನು ಸೇರಿದರು. ಇವರ ವೃಂದಾವನವು ಮೇಲೆ ಹೇಳಿದಂತೆ ಬುದ್ದಿನ್ನಿಯಲ್ಲಿ ಇದ್ದು ನಿತ್ಯವೂ ಧಾರ್ಮಿಕ ವಿಧಿವಿಧಾನದಿಂದ ಪೂಜೆ, ಅನ್ನಸಂತರ್ಪಣೆ ನಡೆಯುತ್ತಿದೆ ಹಾಗೂ ಪ್ರತಿವರ್ಷವೂ ಆರಾಧನಾ ಮಹೋತ್ಸವವು ಬಹು ವಿಜ್ರಂಭಣೆಯಿಂದ ಜರುಗುವುದು. ಶ್ರೀ ಮಾಧವತೀರ್ಥರು ವೃಂದಾವನಸ್ಥರಾಗುವವರೆಗೆ ವೀರಘಟ್ಟದಲ್ಲಿಯೇ ಕಠೋರ ತಪಸ್ಸನ್ನಾಚರಿಸಿದರು. ಬಳಿಕ ಅವರ ಕರ ಸಂಜಾತರಾದ ಶ್ರೀ ಅಕ್ಷೋಭ್ಯತೀರ್ಥರೂ ಅಲ್ಲಿಯೇ ತಪಸ್ಸನ್ನಾಚರಿಸಿದರು. ಮುಂದೆ ಶ್ರೀ ಅಕ್ಷೋಭ್ಯತೀರ್ಥರ ಕರ ಸಂಜಾತರಾದ ಶ್ರೀ ವಿದ್ಯಾಧೀಶತೀರ್ಥರ (ಮೂರನೇ ಪೀಠಾಧಿಪತಿಗಳು) ಅಧಿಕಾರ ಅವಧಿಯಲ್ಲಿ ಸುರಪುರದ ದೊರೆಗಳಿಂದ ಹುಣಸಿಹೊಳೆ ಗ್ರಾಮವನ್ನು ಜಹಾಗೀರ ಆಗಿ ಪಡೆದ ನಂತರ, ಶ್ರೀ ಕಣ್ವಮಠವು ಹುಣಸಿಹೊಳೆಗೆ ಸ್ಥಳಾಂತರಗೊಂಡಿತು. ಇನ್ನೊಂದು ಮಹತ್ವದ ಘಟನೆಯೆಂದರೆ, ಶ್ರೀ ವಿದ್ಯಾಧೀಶತೀರ್ಥರ ಆಪ್ತಶಿಷ್ಯರಾದ ಪೂಜ್ಯಭೀಮಾಚಾರ್ಯರು, ಸ್ವಇಚ್ಛೆಯಿಂದ ಮೋಕ್ಷಾರ್ಥಿಯಾಗಿ ಸಂನ್ಯಾಸಾಶ್ರಮವನ್ನು ಅಪೇಕ್ಷಿಸಲು, ಅವರಿಗೆ ಶ್ರೀ ವಿದ್ಯಾಧೀಶತೀರ್ಥರು ಶ್ರೀ ಕೃಷ್ಣದ್ವೈಪಾಯನತೀರ್ಥರೆಂಬ ನಾಮಾಭಿಧಾನದಿಂದ ಸಂನ್ಯಾಸಾಶ್ರಮವನ್ನಿತ್ತು ಅನುಗ್ರಹಿಸಿದರು. ಶ್ರೀ ವಿದ್ಯಾಧೀಶತೀರ್ಥರ ತದನಂತರ ಕಣ್ವಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾನಿಧಿತೀರ್ಥರು, ಶ್ರೀ ವಿದ್ಯಾಸಂಪೂರ್ಣತೀರ್ಥರು, ಶ್ರೀ ವಿದ್ಯಾಧಿರಾಜತೀರ್ಥರು, ಶ್ರೀ ವಿದ್ಯಾವಿರಾಜತೀರ್ಥರು, ಶ್ರೀ ವಿದ್ಯಾನಿಲಯ ತೀರ್ಥರು, ಶ್ರೀ ವಿದ್ಯಾಮನೋಹರ ತೀರ್ಥರು, ಶ್ರೀ ವಿದ್ಯಾತಪೋನಿಧಿತೀರ್ಥರು, ಶ್ರೀ ವಿದ್ಯಾಭೂಷಣತೀರ್ಥರು, ಶ್ರೀ ವಿದ್ಯಾಭಾಸ್ಕರತಿರ್ಥರು (12 ನೇ ಪೀಠಾಧಿಪತಿಗಳು) ಹುಣಸಿಹೊಳೆ ಕ್ಷೇತ್ರವನ್ನೇ ಕಣ್ವಮಠದ ಕೇಂದ್ರಬಿಂದುವನ್ನಾಗಿಟ್ಟುಕೊಂಡು, ಭಾರತದಾದ್ಯಂತ ಶುಕ್ಲಯಜುರ್ವೇದೀಯರ, ಇನ್ನೂ ವಿಶೇಷವಾಗಿ ಸಮಸ್ತ ಕಣ್ವಶಾಖೀಯರ ಧರ್ಮಾಭಿವೃಧ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಚಾರ ಮಾಡುತ್ತಾ ಬಂದಿದ್ದಾರೆ. ಹನ್ನೆರಡನೇ ಯತಿಗಳಾದ ಶ್ರೀ ವಿದ್ಯಾಭಾಸ್ಕರರ್ತೀರ್ಥರು, ಸತತ 22 ವರ್ಷಗಳ ಕಾಲ ಶ್ರೀ ವಿಠ್ಠಲಕೃಷ್ಣನ ಪೂಜೆಗೈದು, ಸಮಸ್ತ ಕಣ್ವಶಾಖೀಯರಲ್ಲಿ ಆತ್ಮಾಭಿಮಾನದ ಜ್ಯೊತಿಯನ್ನು ಬೆಳಗಿಸಿ ಶ್ರೀ ವಿದ್ಯಾವಾರಿಧಿತೀರ್ಥರಿಗೆ ಸಂನ್ಯಾಸ ದೀಕ್ಷೆಯನ್ನಿತ್ತು ಮಠದ ಪೀಠವನ್ನು ವಹಿಸಿಕೊಟ್ಟರು. ಆದರೆ ಶ್ರೀ ವಿದ್ಯಾವಾರಿಧಿತೀರ್ಥರು ಕಾರಣಾಂತರಗಳಿಂದ ಪೀಠತ್ಯಾಗ ಮಾಡಿದರು. ನಂತರ ಬೆಂಗಳೂರಿನ ಶ್ರೀ ರವೀದ್ರಾಚಾರ್ಯ ಇವರು ಆಶ್ವೀಜ ಮಾಸ ಕೃಷ್ಣಪಕ್ಷ ಪಂಚಮಿ (ಕ್ರಿ. ಶ. 18-10-2019) ರಂದು " ಶ್ರೀ ವಿದ್ಯಾಕಣ್ವವಿರಾಜತೀರ್ಥ" ಎಂಬ ನಾಮದಿಂದ ಶ್ರೀ ಕಣ್ವಮಠದ ಪೀಠಾರೋಹಣ ಮಾಡಿದರು.