||ಶ್ರೀ ವಿಠ್ಠಲ ಕೃಷ್ಣೋ ವಿಜಯತೇ||
ಶ್ರೀ ಯಾಜ್ಞವಲ್ಕ್ಯ ಗುರುಭ್ಯೋನಮಃ
ಶ್ರೀ ಮಾಧವತೀರ್ಥ ಗುರುಭ್ಯೋನಮಃ

ಕಣ್ವಮಠ ಸ್ಥಾಪನೆ:- ಶಾಲಿವಾಹನ ಶಕೆ 1718 (ಕ್ರಿ. ಶ. 1796) ನಳನಾಮ ಸಂವತ್ಸರವು ಕಣ್ವಶಾಖೆಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತಹುದು. ಯಾಕೆಂದರೆ ಈ ವರ್ಷವೇ ಕಣ್ವಶಾಖೆಯ ಸಮಾಜದಲ್ಲಿ ಶ್ರೀ ಯಾಜ್ಞವಲ್ಕ್ಯರ ಕೃಪೆಯಿಂದ ಶ್ರೀ ಶ್ರೀ 1008 ಶ್ರೀ ಮಾಧವತೀರ್ಥರ ದ್ವಾರಾ "ಕಣ್ವಮಠ" ಸ್ಥಾಪಿಸಲ್ಪಟ್ಟಿತು. ಶ್ರೀ ಮಾಧವತೀರ್ಥರ ಪೂರ್ವಾಶ್ರಮದ ಹೆಸರು "ಶ್ರೀ ವೆಂಕಟೇಶಾಚಾರ್ಯರು. ಇವರು. ಕರ್ನಾಟಕದ ರಾಯಚೂರು. ಜಿಲ್ಲೆಯ ದೇವದುರ್ಗದ ನಿವಾಸಿಗಳು ಹಾಗೂ ಶುಕ್ಲ ಯಜುರ್ವೇದಿಯ ಕಣ್ವಶಾಖಾ ದ್ವೈತ ಮತಾನುಯಾಯಿಗಳು. ಶಾ. ಶ. 17 ನೇ ಶತಮಾನದಲ್ಲಿ ಇವರು ಗುಲ್ಬರ್ಗಾ ಜಿಲ್ಲೆಯ ಸುರಪುರ ಎಂಬ ಪಟ್ಟಣದಲ್ಲಿ ವಾಸವಾಗಿದ್ದು ನಿತ್ಯ ಧಾರ್ಮಿಕ ಕೈಂಕರ್ಯಗಳನ್ನು ಪಾಲಿಸುತ್ತಾ, ತಮ್ಮ ಸಹೋದ್ಯೋಗಿಗಳಾದ ಕಣ್ವಶಾಖೀಯ ವಿದ್ವಾಂಸರೊಂದಿಗೆ ಸೇರಿಕೊಂಡು ಶುಕ್ಲ ಯಜುರ್ವೇದದ ತತ್ವಗಳನ್ನು ಕಾತ್ಯಾಯಿನಿ ಸೂತ್ರವನ್ನು ಪ್ರಚಾರ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದರು. ಶ್ರೀ ವೆಂಕಟೇಶಾಚಾರ್ಯರ ಅಗಾಧವಾದ ಪಾಂಡಿತ್ಯ, ತತ್ವನಿಷ್ಠೆ, ವಾದವಿದುಷ್ಯ ಬಹಳೇ ಮೆಚ್ಚುವಂತಹುದು. ಇವರು ಸದಾಚಾರ ಸಂಪನ್ನರೂ, ಒಳ್ಳೆ ತೇಜಸ್ವಿಗಳೂ ಆಗಿದ್ದರು. ವೈದಿಕದ ಧರ್ಮದಲ್ಲಿಯೂ, ತಾರ್ಕಿಕದಲ್ಲಿಯೂ ಒಳ್ಳೆ ನಿರ್ಣಾತರು. ವೇದವಿಹಿತಾಚರಣೆಯಿಂದ ತಮ್ಮ ಮನೆತನದ ಪೂರ್ವಜರ ಪ್ರಖ್ಯಾತಿಯನ್ನು ಕಾಯ್ದುಕೊಂಡು ಬಂದಿದ್ದರು. ಅಲ್ಲದೇ ದಯಾಘನರೂ, ವಿರಕ್ತಶಿಖಾಮಣಿಗಳೂ ಆಗಿದ್ದು ಶಾಂತಿಯೇ ಮೂರ್ತಿವೆತ್ತಂತಿದ್ದರು.  ದಿನಾಲು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ತಮ್ಮ ನಿತ್ಯ ಸ್ನಾನ ಸಂಧ್ಯಾದಿ ಕರ್ಮಗಳನ್ನು ಪೂರೈಸಿದ ಮೇಲೆ ಯಾವಾಗಲೂ ಶ್ರೀ ಆದಿಶೇಷನ ಉಪಾಸನೆಯಲ್ಲಿಯೇ ಕಾಲ ಕಳೆಯುತ್ತಾ ಆತನ ಪರಮಾನುಗ್ರಹಕ್ಕೆ ಪಾತ್ರರಾಗಿದ್ದರು. ಗ್ರಂಥಾವಲೋಕನ, ಪುರಾಣ, ಪ್ರವಚನ, ಕಣ್ವಸಮಾಜದ ವೈದಿಕ ಶಿಕ್ಷಣದ ಚಿಂತನೆಯಲ್ಲೇ ಆಯುಷ್ಯವನ್ನು ಕಳೆದವರು. ಆಗಿನ ಸಮಯದಲ್ಲಿ ಇರುವಂಥ ಬ್ರಾಹ್ಮಣ ಮಠಗಳ ಜೊತೆಗೂಡಿಕೊಂಡು ಕಣ್ವಸಮಾಜದ ಧಾರ್ಮಿಕ ಹಾಗೂ ವೈದಿಕ ಶಿಕ್ಷಣದ ಅಭಿವೃದ್ಧಿ ಗೋಸ್ಕರ ಪ್ರಯತ್ನ ಪಟ್ಟರೂ ಅವರ ಅನಿಸಿಕೆ ಪ್ರಕಾರ ಅಭಿವೃದ್ಧಿ ಸಿಕ್ಕಿರಲಿಲ್ಲ. ಆದಾಗ್ಯೂ ಅವರು ತಮ್ಮೊಂದಿಗಿರುವಂಥ ಕಣ್ವಸಮಾಜದ ವಿದ್ವಾಂಸರೊಂದಿಗೆ ಸೇರಿಕೊಂಡು ಕಣ್ವಸಮಾಜದ ಧಾರ್ಮಿಕ ಅಭಿವೃದ್ಧಿಗೋಸ್ಕರ ಸತತ ಪ್ರಯತ್ನ ಮಾಡುತ್ತಲೇ ಇದ್ದರು. ಹೀಗೆಯೇ ಜೀವನ ನಡೆದಿರಲು ಒಮ್ಮೆ ಅಘಟಿತ ಘಟನೆ ನಡೆಯಿತು. ಒಂದು ದಿವಸ ಆದಿಶೇಷನು ವೆಂಕಟೇಶಾಚಾರ್ಯರಿಗೆ ಸ್ವಪ್ನದಲ್ಲಿ ದರ್ಶನವಿತ್ತು ಹೀಗೆ ಅಪ್ಪಣೆ ಮಾಡಿದನು:- "ಹೇ ಆಚಾರ್ಯ ಶ್ರೇಷ್ಠನೇ, ಇನ್ನು ಕೆಲವೇ ದಿನಗಳಲ್ಲಿ ನಿನಗೆ ವಾಯ್ವಂಶ ಸಂಭೂತರಾದ ಮಹಾ ತಪಸ್ವಿಗಳ ದರ್ಶನವಾಗುವುದು. ಅವರಿಂದ ನೀನು ಈ ಜನ್ಮವನ್ನು ಬಿಟ್ಟು ಬೇರೊಂದು ಜನ್ಮವನ್ನು ಹೊಂದುವಿ. ಅವರು ನಿನಗೆ ವಾಯುದೇವರು ಪ್ರಸಾರ ಮಾಡಿದ ವಿಷ್ಣು ಸರ್ವೋತ್ತಮತ್ವದ ಪ್ರಸಾರ ಕಾರ್ಯವನ್ನು ವಹಿಸಿಕೊಡುವರು. ಅದನ್ನು ನೀನು ನಿರ್ವಹಿಸಿ ಪ್ರೇಮ ಪದವನ್ನು ಹೊಂದು." ಈ ವಿಷಯವನ್ನು ವೆಂಕಟೇಶಾಚಾರ್ಯರು ತಮ್ಮ ಸಮಾಜ ಬಂಧುಗಳಿಗೆ ತಿಳಿಸುತ್ತಾರೆ. ಮುಂದೆ ಕೆಲವೇ ದಿನಗಳಲ್ಲಿ ಉಡುಪಿಯ ಅಷ್ಟಮಠದಲ್ಲೊಂದಾದ ಶಿರೂರು ಮಠದ ಇಪ್ಪತ್ತು ಮೂರನೇ (23 ನೇ) ಶ್ರೀಪಾದಂಗಳವರಾದ ಶ್ರೀ ಶ್ರೀ 1008 ಶ್ರೀ ಲಕ್ಷ್ಮೀ ಮನೋಹರತೀರ್ಥ ಶ್ರೀಪಾದಂಗಳವರು ತಮ್ಮ ಸಂಚಾರ ಕಾರ್ಯಕ್ರಮದಂತೆ ತಾಳಿಕೋಟೆ (ಜಿಲ್ಲಾ: ಬಿಜಾಪುರ) ಮುಖಾಂತರ  ಸುರಪುರಕ್ಕೆ ಆಗಮಿಸುವರು. ಶ್ರೀ ವೆಂಕಟೇಶಾಚಾರ್ಯರು ಪ್ರಮುಖವಾಗಿರುವಂಥ ಸುರಪುರದ ಬ್ರಾಹ್ಮಣ ಸಮಾಜವು ಸಕಲ ಮರ್ಯಾದೆಗಳೊಂದಿಗೆ ಶ್ರೀಪಾದಂಗಳವರನ್ನು ವೈಭವದಿಂದ ಸ್ವಾಗತ ಮಾಡಿ, ಮನಃಪೂರ್ವಕ ಸೇವೆ ಮಾಡಿ ಶ್ರೀಗಳವರಲ್ಲಿ ಅತುಲ ಭಕ್ತ್ಯಾದರಗಳನ್ನು ತೋರಿಸಿದರು. ಅಭೂತವಾದ ಗುರುಸೇವೆಯನ್ನು ಕಂಡ ಶ್ರೀಪಾದಂಗಳವರು ಪ್ರೇಮ ಸಂತೋಷಗೊಂಡು ಇಲ್ಲಿನ ಶಿಷ್ಯ ವೃಂದಕ್ಕೆ ವಿಶೇಷವಾದ ಅನುಗ್ರಹ ಮಾಡಲು ಇಚ್ಛಿಸಿದರು. ಹೀಗೆಯೇ ಯೋಚಿಸುತ್ತ ಅಂದು ರಾತ್ರಿ ಮಲಗಿರಲು ಶ್ರೀಪಾದಂಗಳವರಿಗೆ ಒಂದು ಸ್ವಪ್ನ ದೃಷ್ಟಾಂತವಾಯಿತು. ಭಗವತ್ಸಂಕಲ್ಪವೇ ಬೇರೆ ! ಶ್ರೀಮನ್ನಾರಾಯಣನು ಸ್ವಪ್ನದರ್ಶನವಿತ್ತು ಶ್ರೀ ಲಕ್ಷ್ಮೀ ಮನೋಹರತೀರ್ಥ ಶ್ರೀಪಾದಂಗಳವರಿಗೆ ಹೀಗೆ ಆಜ್ಞಾಪಿಸಿದನು. "ಯತಿಶ್ರೇಷ್ಠನೇ, ನಾಳೆ ನನ್ನ ಭಕ್ತನಾದ ಆದಿಶೇಷನ ಪರಮಾನುಗ್ರಹಕ್ಕೆ ಪಾತ್ರನಾದ ಮತ್ತು ಒಳ್ಳೇ ಪ್ರತಿಭಾವಂತನೂ ಆದ ನನ್ನ ಭಕ್ತನೋರ್ವನು ನಿನ್ನ ಬಳಿಗೆ ಬರುವನು. ಅವನಿಗೆ ನಿನ್ನ ಮೂಲಸ್ಥಾನದಲ್ಲಿ ಆಶ್ರಯ ಕೊಟ್ಟು ಅನುಗ್ರಹ ಮಾಡು. ಅವನು ವಾಯುದೇವರು ಪ್ರಸಾರ ಮಾಡಿದ ತತ್ವಗಳನ್ನು ಪ್ರಸಾರ ಮಾಡಲು ಅತ್ಯಂತ ಸಮರ್ಥನೆಯೂ ಆಗಿರುವನು. ಅವನಿಂದ ಲೋಕದಲ್ಲಿ ನಿನ್ನ ಕೀರ್ತಿಯೂ ಹೆಚ್ಚುವುದು. ಇದಕ್ಕೆ ನೀನು ವಿಮುಖನಾಗಬೇಡ." ಕೂಡಲೇ ಶ್ರೀಗಳಿಗೆ ಎಚ್ಚರವಾಗಿ ಸ್ವಪ್ನದರ್ಶನವಿತ್ತುದನ್ನು ನೆನೆದು ಆನಂದಪುಲಕಿತರಾದರು ಹಾಗೂ ಆಶ್ಚರ್ಯವೂ ಆಯಿತು. ಶ್ರೀಪಾದಂಗಳವರು ಬೆಳಗಿನ ಜಾವದಲ್ಲಿ ಎದ್ದು ತಮ್ಮ ಪ್ರಾತರಹ್ನಿಕಗಳನ್ನು ತೀರಿಸಿಕೊಂಡು ಸುರಪುರದ ಭಕ್ತವೃಂದದವರನ್ನು ಕರೆಯಿಸಿ ಅವರು ಭಕ್ತ್ಯಾತಿಶಯದಿಂದ ಮಾಡಿದ ಗುರುಸೇವೆಯನ್ನು ಪ್ರಶಂಶಿಸಿ ತಮಗಾದ ಸ್ವಪ್ನದೃಷ್ಟಾಂತವನ್ನು ತಿಳಿಸಿದರು. ಇತ್ತ ಶ್ರೀ ವೆಂಕಟೇಶಾಚಾರ್ಯರು ತಮಗಾದ ಸ್ವಪ್ನದೃಷ್ಟಾಂತದ ಮೇರೆಗೆ ತಮಗೆ ನಿಜವಾದ ಮಾರ್ಗದರ್ಶಕ ಗುರುಗಳು ಇವರೇ ಎಂದೂ, ಅಂತೆಯೇ ಭಗವಂತನು ಇವರಿಗೂ ಹೀಗೆ ಪ್ರೇರಣೆ ಮಾಡಿರುವನೆಂದು ಭಾವಿಸಿ ತಮಗೂ ಕೆಲವು ದಿನಗಳ ಹಿಂದೆ ಆಗಿದ್ದ ಸ್ವಪ್ನದೃಷ್ಟಾಂತವನ್ನು ಶ್ರೀ ಶ್ರೀ 1008 ಶ್ರೀ ಲಕ್ಷ್ಮೀ ಮನೋಹರತೀರ್ಥ ಶ್ರೀಪಾದಂಗಳವರಿಗೆ ವೆಂಕಟೇಶಾಚಾರ್ಯರು ವಿವರಿಸಿದರು. ಆಗ ಶ್ರೀಪಾದಂಗಳವರು ತಮಗೆ ಸ್ವಪ್ನದ ಮೂಲಕ ಆದ ಭಗವದಾಜ್ಞಯ ಮೇರೆಗೆ ವೆಂಕಟೇಶಾಚಾರ್ಯರೇ ಆ ವ್ಯಕ್ತಿ. ಇದರಲ್ಲಿ ಸಂದೇಹವೇ ಇಲ್ಲ. ವೆಂಕಟೇಶಾಚಾರ್ಯರ ದಿವ್ಯ ತೇಜಸ್ಸನ್ನೂ, ವಿಷ್ಣುಭಕ್ತಿಯಿಂದ ಪರಿಪಕ್ವವಾಗಿರುವ ಅವರ ಮನಸ್ಸನ್ನೂ ಕಂಡು ತಮ್ಮ ಧರ್ಮ ಪ್ರಸಾರದ ಬೀಜಾರೋಹಣಕ್ಕೆ ಇವರ ಮನೋಕ್ಷೇತ್ರವು ಯೋಗ್ಯವಾಗಿರುವದೆಂದು ನಿಶ್ಚಯಿಸಿ ಶ್ರೀ ವೆಂಕಟೇಶಾಚಾರ್ಯರಿಗೆ ಸನ್ಯಾಸಾಶ್ರಮ ಕೊಡುವದಾಗಿ ತಿಳಿಸಿದರು ಮತ್ತು ಈ ಮಹತ್ವದ ಕಾರ್ಯವನ್ನು ಜರುಗಿಸಲು ಶ್ರೀ ಕೃಷ್ಣನ ಸನ್ನಿಧಿಯೇ ಯೋಗ್ಯವೆಂದೂ, ಇಲ್ಲಿಯ ಎಲ್ಲಾ ಭಕ್ತವೃಂದವೂ ಉಡುಪಿ ಕ್ಷೇತ್ರಕ್ಕೆ ಆಗಮಿಸಿ ಈ ಶುಭಕಾರ್ಯವನ್ನು ಪೂರೈಸಿಕೊಂಡು ಬರಬೇಕೆಂದೂ ಅಪ್ಪಣೆ ಮಾಡಿದರು. ಶ್ರೀ ಲಕ್ಷ್ಮೀ ಮನೋಹರ ತೀರ್ಥ ಶ್ರೀಪಾದಂಗಳವರಿಂದ ಆಜ್ಞಪ್ತರಾದ ವೇ. ಮೂ. ವೆಂಕಟೇಶಾಚಾರ್ಯರು ತಮ್ಮ ಪ್ರಮುಖ ಕಣ್ವವಿಪ್ರ ಪರಿವಾರದೊಂದಿಗೆ ಸಂನ್ಯಾಸದೀಕ್ಷೆಯನ್ನು ಸ್ವೀಕರಿಸಲು ಶ್ರೀ ಕೃಷ್ಣನ ಸನ್ನಿಧಾನವಾದ ಉಡುಪಿ **ಕ್ಷೇತ್ರಕ್ಕೆ ಪ್ರಯಾಣ ಮಾಡಿದರು. ಶ್ರೀ ಲಕ್ಷ್ಮೀ ಮನೋಹರತೀರ್ಥ ಶ್ರೀಪಾದಂಗಳವರು ಉಡುಪಿಯಲ್ಲಿ ಸಭೆಯೊಂದನ್ನು ಕರೆದು, ಸುರಪುರದಲ್ಲಿ ತಮಗಾದ ಸ್ವಪ್ನದೃಷ್ಟಾಂತವನ್ನೂ, ಸುರಪುರದ ಬ್ರಾಹ್ಮಣ ಸಮುದಾಯವು ಉಡುಪಿಗೆ ಆಗಮಿಸಿದ ವಿದ್ಯಮಾನವನ್ನೂ ಹಾಗೂ ಶ್ರೀ ವೆಂಕಟೇಶಾಚಾರ್ಯರಿಗೆ ಸಂನ್ಯಾಸ ದೀಕ್ಷಾ ಕೊಡುವ ವಿಚಾರವನ್ನೂ ಸಭೆಯಲ್ಲಿ ಉಪಸ್ಥಿತರಿದ್ದ ಉಡುಪಿಯ ಅಷ್ಟ ಮಠಗಳ ಯತಿವರ್ಯರಿಗೆ ನಿವೇದಿಸಿದರು ಮತ್ತು ತೇಜೋಮೂರ್ತಿಗಳೂ, ಆದಿಶೇಷನ ಉಪಾಸನೆ ಮಾಡಿ ಅವನ ಅನುಗ್ರಹವನ್ನು ಸಂಪಾದಿಸಿದವರೂ ಆದ ಸುರಪುರದ ಶ್ರೀ ವೆಂಕಟೇಶಾಚಾರ್ಯರನ್ನು, ಸಭೆಯಲ್ಲಿ ವಿರಾಜಮಾನವಾಗಿದ್ದ ಅಷ್ಟಮಠಗಳ ಯತಿವರೇಣ್ಯರಿಗೆ ಪರಿಚಯಿಸಿದರು. ಸ್ವಪ್ನದೃಷ್ಟಾಂತವನ್ನು ಕೇಳಿ ಅತೀವ ಆನಂದಾಶ್ಚರ್ಯವಾದ ಎಲ್ಲಾ ಯತಿಶ್ರೇಷ್ಠರೂ " ಎಲ್ಲವೂ ಶ್ರೀ ಹರಿಯ ಇಚ್ಛೆ ಅಲ್ಲವೇ! " ಆ ಭಗವಂತನ ಇಚ್ಛೆಯಂತೆ ಎಲ್ಲಾ ಕಾರ್ಯಗಳು ನಡೆಯಲಿ ಎಂದು ಹೇಳಿ ಶ್ರೀ ವೆಂಕಟೇಶಾಚಾರ್ಯರಿಗೆ ಸಂನ್ಯಾಸ ದೀಕ್ಷೆಯನ್ನು ಕೊಡುವ ಶುಭದಿನವನ್ನೂ ಗೊತ್ತು ಮಾಡಿದರು ಮತ್ತು ಈ ಭಾವೀ ನೂತನ ಯತಿಗಳು ಮಹಾಜ್ಞಾನಿಗಳೂ, ಮಹಾತಪೋಧನರೂ ಆದ ಶ್ರೀ ಕಣ್ವಮಹರ್ಷಿಗಳ ಪರಂಪರೆಯಲ್ಲಿ ಬಂದವರಾದ್ದರಿಂದ ಈ ಗುರುಪರಂಪರೆಯನ್ನು ಅಂಥ ಮಹರ್ಷಿಗಳ ಹೆಸರಿನಿಂದಲೇ ಕೆರೆಯುವುದು ಯಥೋಚಿತವಾಗಿದೆ. ಆ ಜ್ಞಾನಿಗಳ ಹೆಸರಿನಿಂದಲೇ "ಮಠವು" ಲೋಕದಲ್ಲಿ ಪ್ರಸಿದ್ಧಿಯನ್ನು ಪಡೆಯಲಿ. ಆದ್ದರಿಂದ ಮಠಕ್ಕೆ "ಕಣ್ವಮಠ" ಎಂಬುದಾಗಿ ಹೆಸರಿಸುವುದು ಅತ್ಯಂತ ಯೋಗ್ಯವಾಗಿದೆ ಎಂದು ನಿಷ್ಕರ್ಷಿಸಲ್ಪಟ್ಟಿತು. ಶ್ರೀಗಳ ಆಜ್ಞಾನುಸಾರ ವೆಂಕಟೇಶಾಚಾರ್ಯರು, ತಮ್ಮ ಸಂನ್ಯಾಸದೀಕ್ಷಾ ಪೂರ್ವದಲ್ಲಿ ನಡೆಯಬೇಕಾದ ಎಲ್ಲ ಕರ್ಮಾದಿಗಳನ್ನು ವಿಧಿವತ್ತಾಗಿ ಪೂರೈಸಿದರು. ಅನೇಕ ಮಂದಿ ಪಂಡಿತೋತ್ತಮರೂ, ಭಾಗವತೋತ್ತಮರೂ, ವೇದವೇತ್ತರೂ, ಲೌಕಿಕ ಶ್ರೇಷ್ಠರೂ, ಉಡುಪಿಯ ಅಷ್ಟ ಮಠಗಳ ಯತಿವರೇಣ್ಯರೂ, ಶ್ರೀ ಲಕ್ಷ್ಮೀ ಮನೋಹರ ತೀರ್ಥರೂ ನೆರೆಯಿಸಿದ ಸಭೆಯಲ್ಲಿ ಬಂದು ಕೂಡಿದರು. ಭಗವತ್ಸಂಕಲ್ಪವನುಗುಣವಾಗಿ ಪೂರ್ವಯೋಜಿತ ಕಾರ್ಯಕ್ರಮದಂತೆ ಶ್ರೀ ಲಕ್ಷ್ಮೀ ಮನೋಹರತೀರ್ಥ ಶ್ರೀಪಾದಂಗಳವರು ಶಾ. ಶ. 1718 (ಕ್ರಿ. ಶ. 1796) ನಳನಾಮ ಸಂವತ್ಸರ ಮಾಘ ಶುದ್ಧ ಪಂಚಮಿಯ, ಶ್ರೀ ಕಣ್ವಮಹರ್ಷಿಗಳ ಜಯಂತಿಯ ದಿನದ ಶುಭ ಮುಹೂರ್ತದಲ್ಲಿ ಶ್ರೀ ವೆಂಕಟೇಶಾಚಾರ್ಯರಿಗೆ ವಿಧ್ಯುಕ್ತವಾಗಿ ಸಂನ್ಯಾಸ ದೀಕ್ಷೆಯನ್ನಿತ್ತು " ಮಾಧವ ತೀರ್ಥ"  ರೆಂಬ ನಾಮಾಭಿಧಾನದಿಂದ ವೇದಾಂತ ಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಿ ಶ್ರೀಮದಾನಂದತೀರ್ಥ ಭಗವತ್ಪಾದರಿಂದ ಪರಂಪರಾಗತವಾಗಿ ಉಪದೇಶಿಸಿಸಲ್ಪಟ್ಟ ಮೂಲಮಂತ್ರೋಪದೇಶ ಮಾಡಿ ಉಪಾಸನಾರ್ಥವಾಗಿ ಶ್ರೀಮದಾನಂದತೀರ್ಥ ಕರಾರ್ಚಿತ ತಾಂಡವ ಶ್ರೀ ವಿಠ್ಠಲಕೃಷ್ಣನ ಮೂರ್ತಿಯನ್ನೂ, ಅಲಂಕಾರಾರ್ಥವಾಗಿ ರುಕ್ಮಿಣಿ ಸತ್ಯಭಾಮಾ ಸಮೇತ ಶ್ರೀ ವೇಣುಗೋಪಾಲಕೃಷ್ಣನ ಪ್ರತಿಮೆಯನ್ನೂ, ಶ್ರೀ ಮುದ್ರೆ, ಬಲಮುರಿ ಶಂಖ ಇವೆಲ್ಲವುಗಳನ್ನು ದಯಪಾಲಿಸಿದರು ಮತ್ತು ಎಲ್ಲ ಮಠಾಧೀಶರೂ ಶ್ರೀ ಮಾಧವ ತೀರ್ಥರನ್ನು ವಿಶೇಷವಾಗಿ ಆಶೀರ್ವದಿಸಿ, ಶ್ರೀ ಕಣ್ವಮಠ ಪರಂಪರೆಯು ಅತ್ಯಂತ ಪ್ರಖ್ಯಾತಿಯನ್ನು ಹೊಂದಲಿ ಎಂದು ಶುಭಾಶೀರ್ವಾದ ಮಾಡಿದರು.            ಶ್ರೀ ಮನ್ಮಾಧವತೀರ್ಥರು ಭಕ್ತಿಪುರಸ್ಸರವಾಗಿ ಶ್ರೀ ಲಕ್ಷ್ಮೀ ಮನೋಹರತೀರ್ಥ ಶ್ರೀಪಾದಂಗಳವರ ಚರಣಾರವಿಂದಗಳಲ್ಲಿ ತಮ್ಮ ಅನಂತಾನಂತ ಪ್ರಮಾಣಗಳನ್ನು ಸಮರ್ಪಿಸಿದರು. ನಂತರ ಶ್ರೀ ಮಾಧವತೀರ್ಥರು ಅಲ್ಲಿಯೇ ಕೆಲವು ದಿನಗಳ ಕಾಲ ಕಳೆದು, ಮುಂದಿನ ಭಗವತ್ಸೇವಾ ಕಾರ್ಯವು ಬಹಳವಿದ್ದುದರಿಂದ ಗುರುಗಳ ಅಪ್ಪಣೆ ಪಡೆದು, ಎಲ್ಲ ಅಷ್ಟ ಮಠಗಳ ಯತಿವರ್ಯರ ಆಶೀರ್ವಾದ ಪಡೆದು ತಮ್ಮ ಪರಿವಾರದೊಂದಿಗೆ ಸಕಲ ವೈಭವದಿಂದ ಸುರಪುರಕ್ಕೆ ಪ್ರಯಾಣ ಬೆಳೆಸಿದರು.


Back